ಮೈಸೂರು ಯುದ್ಧಗಳು - ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ಬ್ರಿಟಿಷರು ಮೈಸೂರು ಸಂಸ್ಥಾನದ ವಿರುದ್ಧ ನಡೆಸಿದ ನಾಲ್ಕು ಯುದ್ಧಗಳು. ಈ ಯುದ್ಧಗಳಲ್ಲಿ ಕೆಲವೊಮ್ಮೆ ಬ್ರಿಟಿಷರು ಏಕಾಂಗಿಯಾಗಿ ಮತ್ತು ಕೆಲವೊಮ್ಮೆ ನೆರೆಯ ರಾಜ್ಯಗಳ ಒಕ್ಕೂಟ ರಚಿಸಿಕೊಂಡು ಭಾಗವಹಿಸಿದರು. 1761ರಲ್ಲಿ ಮೈಸೂರಿನ ಸರ್ವಾಧಿಕಾರಿಯಾದ ಹೈದರ್ ಅಲಿ ರಾಜ್ಯ ವಿಸ್ತರಣೆಗೆ ಗಮನ ನೀಡಿದ. ಇದರ ಪರಿಣಾಮ 1763ರ ಹೊತ್ತಿಗೆ ಮೈಸೂರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜ್ಯವಾಗಿ ಹೊರಹೊಮ್ಮಿತು. ಈ ಬೆಳೆವಣಿಗೆಯನ್ನು ಸಹಿಸದ ಬ್ರಿಟಿಷರು ಮರಾಠರನ್ನು ಮತ್ತು ಹೈದರಾಬಾದಿನ ನಿಜಾóಮನನ್ನು ಮೈಸೂರಿನ ವಿರುದ್ಧ ಎತ್ತಿಕಟ್ಟಿದರು.

ಒಂದನೆಯ ಮೈಸೂರು ಯುದ್ಧ (1766 - 69) : 1766ರ ಹೊತ್ತಿಗೆ ಬ್ರಿಟಿಷರು ಮರಾಠರು ಮತ್ತು ನಿಜಾóಮ್ ಸೇರಿ ಹೈದರ್ ಅಲಿಯ ವಿರುದ್ಧ ಒಕ್ಕೂಟ ರಚಿಸಿಕೊಂಡರು. ಮಲಬಾರ್ ಮತ್ತು ಮಂಗಳೂರು ತೀರಪ್ರದೇಶವನ್ನು ಗೆದ್ದುಕೊಂಡ ಹೈದರ್ ಅಲಿ ಈ ತ್ರಿಕೂಟವನ್ನು ಭೇದಿಸಲು ಸಜ್ಜಾದ. ಈ ಮೂವರನ್ನು ಮೈಮೇಲೆ ಹಾಕಿಕೊಳ್ಳಲು ಇಚ್ಛಿಸದ ಅವನು ಮರಾಠರನ್ನು ಮೊದಲು ಸಂತೃಪ್ತಿಗೊಳಿಸಿದ. ಅವರಿಗೆ ಕೆಲವು ಕೋಟೆ ಮತ್ತು ಹಣ ನೀಡಿ ತಟಸ್ಥವಾಗುಳಿಯುವಂತೆ ಮಾಡಿದ. ವಿದೇಶೀಯರ ವಿರುದ್ಧ ಭಾರತೀಯರು ಒಂದಾಗಬೇಕೆಂಬ ನಿಲವು ತಳೆದು ನಿಜಾóಮನನ್ನು ಒಲಿಸಿಕೊಂಡ. 1767ರ ಆಗಸ್ಟ್‍ನಲ್ಲಿ ಹೈದರ್ ನಿಜಾಮನ ಸೈನ್ಯದೊಡಗೂಡಿ ಕರ್ಣಾಟಿಕ್ ಪ್ರದೇಶ ಅಂದರೆ ಬ್ರಿಟಿಷರ ಮದರಾಸು ಪ್ರಾಂತ್ಯದ ಮೇಲೆ ದಾಳಿ ಮಾಡಿದ.

ಹೈದರ್ ಬ್ರಿಟಿಷ್ ಸೇನಪತಿ ಕರ್ನಲ್ ಸ್ಮಿತ್‍ನ ತೀವ್ರ ಪ್ರತಿರೋಧವನ್ನು ಎದುರಿಸಿ ಮದ್ರಾಸ್ ಪ್ರಾಂತ್ಯದ ಗಮನಾರ್ಹ ಭಾಗಗಳನ್ನು ವಶಪಡಿಸಿಕೊಂಡ. ಈ ವೇಳೆಗೆ ನಿಜಾóಮ ಯುದ್ಧದಿಂದ ಹಿಂದೆ ಸರಿದ. ಹೈದರ್ ಅಲಿ ಧೃತಿಗೆಡದೆ ಮುನ್ನುಗ್ಗಿ ಮದ್ರಾಸ್ ಪಟ್ಟಣದ ಹೆಬ್ಬಾಗಿಲಿನಲ್ಲೇ ಕಾಣಿಸಿಕೊಂಡ. ಇದರಿಂದ ಗಾಬರಿಗೊಂಡ ಬ್ರಿಟಿಷರು ಹೈದರನಿಗೆ ತಲೆಬಾಗಿ ಒಪ್ಪಂದಕ್ಕೆ ಮುಂದಾದರು. ಈ ಯುದ್ಧದಲ್ಲಿ ಬ್ರಿಟಿಷರು ಅಪಾರ ಹಾನಿ ಅನುಭವಿಸಿದರು. ಅವರಿಗೆ ತೀವ್ರ ಮುಖಭಂಗವಾಯಿತು. ಕೊನೆಗೆ ಹೈದರ್ ಅಲಿಯ ಷರತ್ತುಗಳಿಗೆ ಕಣ್ಣುಮುಚ್ಚಿಕೊಂಡು ಸಹಿ ಹಾಕಿದರು. ಈ ಒಪ್ಪಂದ ಹೈದರನ ಘನತೆಯನ್ನು ಹೆಚ್ಚಿಸಿತು.
ಎರಡನೆಯ ಮೈಸೂರು ಯುದ್ಧ (1780-84) : ಹೈದರ್ ಅಲಿ ಇಂಗ್ಲಿಷರನ್ನು ಭಾರತದಿಂದ ಹೊರದೂಡಬೇಕೆಂದು ಧೃಡ ನಿರ್ಧಾರ ಮಾಡಿದ. ಇಂಗ್ಲಿಷರು ಕೂಡ ಮೈಸೂರು ರಾಜ್ಯ ತಮ್ಮ ಮೊದಲ ವೈರಿಯೆಂದು ಭಾವಿಸಿದರು. 1770ರ ಅನಂತರ ಮರಾಠರು ಮೈಸೂರಿನ ಮೇಲೆ ಹಲವಾರು ಬಾರಿ ಧಾಳಿ ಮಾಡಿದರು. 1769ರ ಒಪ್ಪಂದದ ಮೇರೆಗೆ ಮರಾಠರ ವಿರುದ್ಧ ಹೈದರನ ನೆರವಿಗೆ ಬ್ರಿಟಿಷರು ಬರಬೇಕಾಗಿತ್ತು. ಆದರೆ ಅವರು ಬರಲಿಲ್ಲ. ಹೈದರ್ ಮರಾಠರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಕೃಷ್ಣಾನದಿಯವರೆಗೂ ರಾಜ್ಯ ವಿಸ್ತರಿಸಿದ. ಮರಾಠರು ಮತ್ತು ನಿಜಾóಮ ಆಂಗ್ಲರ ವಿರುದ್ಧ ಬೇಸರಗೊಂಡಿದ್ದರು. ಈ ಸಮಯವನ್ನು ಸದುಪಯೋಗಪಡಿಸಿಕೊಂಡ ಹೈದರ್ ಬ್ರಿಟಿಷರ ವಿರುದ್ಧ ಮಿತ್ರಕೂಟ ರಚಿಸುವಲ್ಲಿ ಯಶಸ್ವಿಯಾದ. ಮರಾಠರ ನಾನಾ ಫಡ್ನವೀಸ್, ಸಿಂಧ್ಯ, ಗಾಯಕ್‍ವಾಡ್, ಮತ್ತು ಹೋಳ್ಕರರು, ಹೈದರ ನೆರವಿಗೆ ಬರುವುದಾಗಿ ತಿಳಿಸಿದರು. ನಿಜಾóಮನೂ ಬೆಂಬಲ ನೀಡಿದ.

ಬ್ರಿಟಿಷರನ್ನು ಮೂಲೋತ್ಪಾಟನೆ ಮಾಡುವ ಅಂಗವಾಗಿ ಒಂದು ಲಕ್ಷಕ್ಕೂ ಹೆಚ್ಚು ಸೈನ್ಯವನ್ನು ಸಜ್ಜುಗೊಳಿಸಿದ ಹೈದರ್ ಕರ್ಣಾಟಿಕ್ ಪ್ರದೇಶದ ಮೇಲೆ ದಾಳಿ ಪ್ರಾರಂಭಿಸಿದ. ಕರ್ನಲ್ ಬ್ಯಾಲಿಯ ಪಡೆಯನ್ನು ನಾಶಗೊಳಿಸಿ ಅವನನ್ನು ಸೆರೆ ಹಿಡಿಯಲಾಯಿತು. ಜನರಲ್ ಹೆಕ್ಟರ್ ಮನ್ರೋ ಸೋತು ಪಲಾಯನ ಮಾಡಿದ. ಅದರ ಮೈತ್ರಿಕೂಟದ ಇತರ ಭಾಗಿದಾರರು ಏನನ್ನೂ ಮಾಡದೆ ಕೇವಲ ವೀಕ್ಷಕರಾಗಿದ್ದರು. ನಿಜಾóಮ ಒಬ್ಬ ಸೈನಿಕನನ್ನೂ ಕಳುಹಿಸಲಿಲ್ಲ. ಮರಾಠರ ಮಹದಾಜಿ ಸಿಂಧ್ಯ ಇಂಗ್ಲಿಷರೊಂದಿಗೆ ಸಾಲ್ಬಾಯಿ ಒಪ್ಪಂದ ಮಾಡಿಕೊಂಡು ಹೈದರನಿಂದ ದೂರ ಉಳಿದ. ಆದ್ದರಿಂದ ಹೈದರ್ ಅಲಿಗೆ ಮೈತ್ರಿಕೂಟದಿಂದ ಯಾವುದೇ ನೆರವು ಬರಲಿಲ್ಲ. ಆದರೆ ಅವರು ಇಂಗ್ಲೀಷರೊಂದಿಗೆ ಸೇರದಂತೆ ತಡೆಯುವುದರಲ್ಲಿ ಆತ ಸಫಲನಾದ.

ಹೈದರ್ ಯುದ್ಧವನ್ನು ಉತ್ಸಾಹದಿಂದ ಮುಂದುವರಿಸಿದ. ಮದರಾಸು ಕೌನ್ಸಿಲ್‍ನ ಸದಸ್ಯರು ಪ್ರಾಣಭಯದಿಂದ ಸಮುದ್ರ ಹೊಕ್ಕು ದೋಣಿಗಳಲ್ಲಿ ಆಶ್ರಯ ಪಡೆದರು. ಯುದ್ಧದ ಪರಿಣಾಮವಾಗಿ ಇಂಗ್ಲೀಷರ ವೈಟ್ ಹಿಲ್ ನೇತೃತ್ವದ ಮದರಾಸು ಸರ್ಕಾರ ವಿಸರ್ಜಿತವಾಗಿ ಜನರಲ್ ಐರ್ ಕೂಟ್ ಗವರ್ನರ್ ಆದ. 1782ರಲ್ಲಿ ಹೈದರ್ ಅಲಿ ಅರ್ಕಾಟನ್ನು ಕೇಂದ್ರವಾಗಿ ಮಾಡಿಕೊಂಡು ಯುದ್ಧದಲ್ಲಿ ಮಗ್ನರಾಗಿದ್ದಾಗಲೇ ಮರಣಾಂತಿಕ ಬೆನ್ನು ಹುಣ್ಣುಬಂದಿತು. ಅದೇ ವರ್ಷ ಡಿಸೆಂಬರ್ 16 ರಂದು ಮರಣ ಹೊಂದಿದ.
ಹೈದರ್‍ನ ಮರಣಾನಂತರ ಅವನ ಮಗ ಟಿಪ್ಪುಸುಲ್ತಾನ್ ಉತ್ತರಾಧಿಕಾರಿಯಾದ. ತಂದೆಯೊಂದಿಗೆ ಯುದ್ಧಗಳಲ್ಲಿ ಭಾಗವಹಿಸಿ ಪರಾಕ್ರಮಿ ಎನಿಸಿದ್ದ ಈತ ಬ್ರಿಟಿಷರ ವಿರುದ್ಧ ಯುದ್ಧವನ್ನು ಮುಂದುವರಿಸಿದ. ಬ್ರಿಟಿಷರು ಟಿಪ್ಪುವಿನ ಗಮನವನ್ನು ಬೇರೆಡೆಗೆ ಸೆಳೆಯಲು ಪಶ್ಚಿಮ ಕರಾವಳಿಯಲ್ಲೂ ಯುದ್ಧ ಪ್ರಾರಂಭಿಸಿದರು. ಪೂರ್ವದ ಕಡೆ ತನ್ನ ಕಾರ್ಯಾಚರಣೆಯನ್ನು ಸೀಮಿತಗೊಳಿಸಿದ ಟಿಪ್ಪು ಮಂಗಳೂರಿನ ರಕ್ಷಣೆಗಾಗಿ ಧಾವಿಸಿದ. ಸ್ವತಃ ಸೈನ್ಯದ ನೇತೃತ್ವ ವಹಿಸಿ ಟಿಪ್ಪು ಮುತ್ತುವ ಬ್ರಿಟಿಷರ ಸಂಚು ವಿಫಲವಾಯಿತು. ದೀರ್ಘ ಕಾಲದ ಯುದ್ಧದಿಂದ ಉಭಯತ್ರಯರೂ ಬಸವಳಿದಿದ್ದರು. 1784 ಮಾರ್ಚ್ 11 ರಂದು ಮಂಗಳೂರು ಒಪ್ಪಂದ ಮಾಡಿಕೊಳ್ಳಲಾಯಿತು.

ಮಂಗಳೂರು ಒಪ್ಪಂದದ ಮೂಲಕ ಟಿಪ್ಪು ಕರ್ನಾಟಕ ಮತ್ತು ಮಲಬಾರ್ ತೀರದ ತನ್ನ ಪ್ರದೇಶಗಳನ್ನೆಲ್ಲ ಹಿಂದಕ್ಕೆ ಪಡೆದ. ತಮಿಳುನಾಡು ಭಾಗದಲ್ಲಿ ಇಂಗ್ಲೀಷರು ಯುದ್ಧ ಕಾಲದಲ್ಲಿ ಆಕ್ರಮಿಸಿಕೊಂಡಿದ್ದ ಮೈಸೂರಿನ ಭಾಗಗಳನ್ನು ಟಿಪ್ಪುವಿಗೆ ಹಿಂದಿರುಗಿಸಬೇಕಾಯಿತು. ಇಬ್ಬರೂ ಇನ್ನೊಬ್ಬರ ಶತ್ರುಗಳಿಗೆ ಸಹಾಯಮಾಡಬಾರದೆಂಬ ಷರತ್ತನ್ನು ಸೇರಿಸಲಾಯಿತು. ಈ ಒಪ್ಪಂದದಿಂದ ಟಿಪ್ಪುವಿಗೆ ಅನುಕೂಲವಾಗಿತ್ತು. ಬ್ರಿಟಿಷರು ನಿರಾಸೆಗೊಂಡರು. ಇದು ತಮಗೆ ಅವಮಾನಕರವಾದುದೆಂದು ಅವರು ಭಾವಿಸಿದರು.

ಮೂರನೆಯ ಮೈಸೂರು ಯುದ್ಧ (1790-92) : ಮರಾಠರು ಮತ್ತು ನಿಜಾಮನೊಡನೆ 1784ರ ತರುವಾಯವೂ ಟಿಪ್ಪು ಯುದ್ಧಗಳಲ್ಲಿ ತೊಡಗಿದ್ದ. ಆದರೆ ಬ್ರಿಟಿಷರಿಗೆ ಅನುಕೂಲವಾಗಬಾರದೆಂಬ ದೃಷ್ಟಿಯಿಂದ ತಾನು ಹೆಚ್ಚು ಗೆಲುವು ಸಾಧಿಸಿದ್ದರೂ ಮರಾಠರಿಗೆ ಉತ್ತರದ ಗಡಿಯ ಅನೇಕ ಪ್ರದೇಶಗಳನ್ನು ಬಿಟ್ಟುಕೊಟ್ಟು ಗಜೇಂದ್ರಗಡ ಒಪ್ಪಂದವನ್ನು ಮಾಡಿಕೊಂಡ (1787). ನಿಜಾóಮನಿಗೂ ಕೆಲವು ಪ್ರದೇಶಗಳು ದೊರೆತವು.

1787ರಲ್ಲಿ ಟಿಪ್ಪು ಸುಲ್ತಾನ್ ಬಾದಶಹ ಎಂಬ ಬಿರುದು ಧರಿಸಿದ. ಇದರಿಂದ ಹಿಂದಿನ ಅರಸೊತ್ತಿಗೆಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿ ತಾನು ಸರ್ವತಂತ್ರ ಸ್ವತಂತ್ರ ರಾಜನಾದ. ಫ್ರೆಂಚರನ್ನು ಒಲಿಸಿಕೊಂಡು ಫ್ರಾನ್ಸಿನ ನೆರವು ಪಡೆಯಲು ಪ್ರಯತ್ನ ನಡೆಸಿದ. ಪರ್ಷಿಯ, ಆಫ್ಫಾನಿಸ್ತಾನ, ತುರ್ಕಿ ಇತ್ಯಾದಿ ದೇಶಗಳಿಗೂ ರಾಯಭಾರಿಗಳನ್ನು ಕಳುಹಿಸಿದ. ಈ ಘಟನೆಗಳನ್ನು ಗಮನಿಸುತ್ತಿದ್ದ ಇಂಗ್ಲಿಷರು ಟಿಪ್ಪುಸುಲ್ತಾನನನ್ನು ಹತ್ತಿಕ್ಕಲು ಎಲ್ಲ ಪ್ರಯತ್ನಗಳನ್ನು ಮುಂದುವರಿಸಿದರು.

	ತಿರುವಾಂಕೂರು ರಾಜನ ಮೇಲೆ ದಂಡೆತ್ತಿಹೋದ ಕಾರಣವನ್ನು ಮುಂದೊಡ್ಡಿ ಇಂಗ್ಲಿಷರು ಟಿಪ್ಪುವಿನ ಮೇಲೆ ಯುದ್ಧ ಸಾರಿದರು. ಮಹತ್ತ್ವಾಕಾಂಕ್ಷೆಯಿಂದ ನಿಜಾಮನೂ ಮರಾಠರೂ ಇಂಗ್ಲಿಷರ ನೆರವಿಗೆ ಬಂದರು. ಗವರ್ನರ್ ಕಾರ್ನವಾಲೀಸ್ ಸ್ವತಃ ಸೇನಾನಾಯಕತ್ವ ವಹಿಸಿ ಮೈಸೂರಿನ ಮೇಲೆ ದಂಡೆತ್ತಿ ಬಂದ. ಅವಿರತ ಯುದ್ಧಗಳಿಂದ ಟಿಪ್ಪುವಿನ ರಾಜ್ಯದ ಸಂಪನ್ಮೂಲಗಳು ಬರಿದಾಗಿ ಸೈನೈವೂ ದಣಿದಿದ್ದಿತು. ಬ್ರಿಟಿಷರ ತಂತ್ರ ಫಲಿಸಿತು. 1791ರ ಮಾರ್ಚ್ ತಿಂಗಳಲ್ಲಿ ಬೆಂಗಳೂರು ನಗರ ಇಂಗ್ಲಿಷರ ವಶವಾಯಿತು. 1792ರ ಫೆಬ್ರುವರಿಯಲ್ಲಿ ಮರಾಠರೂ ಇಂಗ್ಲಿಷರೂ ಒಗ್ಗೂಡಿ ಶ್ರಿರಂಗಪಟ್ಟಣದ ಕೋಟೆಯನ್ನು ಸುತ್ತುವರಿದರು. ಟಿಪ್ಪು ಎಷೇ ಪ್ರಯತ್ನಪಟ್ಟರೂ ಒಕ್ಕೂಟದ ಸೈನ್ಯವನ್ನು ಹಿಮ್ಮೆಟ್ಟಿಸಲಾಗಲಿಲ್ಲ. ಹಾಗೆಯೇ ಅವರಿಗೆ ಶ್ರೀರಂಗಪಟ್ಟಣದ ಕೋಟೆ ವಶವಾಗದಂತೆ ನೋಡಿಕೊಂಡ. ಕೊನೆಗೆ ಸಂಧಾನಗಳೇರ್ಪಟ್ಟು ಶಾಂತಿ ಒಪ್ಪಂದವಾಯಿತು.

	1792ರ ಈ ಒಪ್ಪಂದ ಶ್ರೀರಂಗಪಟ್ಟಣದ ಒಪ್ಪಂದವೆಂದೇ ಪ್ರಸಿದ್ಧವಾಗಿದೆ. ಈ ಒಪ್ಪಂದದಿಂದಾಗಿ ಟಿಪ್ಪು ತನ್ನ ರಾಜ್ಯದ ಸುಮಾರು ಅರ್ಧಭಾಗವನ್ನು ಇಂಗ್ಲಿಷರಿಗೆ ಒಪ್ಪಿಸಬೇಕಾಯಿತು. ಅದನ್ನು ಒಕ್ಕೂಟದ ಮೂವರು ಹಂಚಿಕೊಂಡರು. ಈಗಿನ ತಮಿಳುನಾಡು ಭಾಗದ ಬಹುತೇಕ ಪ್ರದೇಶಗಳು ಇಂಗ್ಲಿಷರ ಅಧೀನವಾದುವು. ಮಲಬಾರ್, ಮಂಗಳೂರು ಮತ್ತು ಕೊಡಗುಗಳು ಇಂಗ್ಲಿಷರ ಕೈಸೇರಿದವು. ತುಂಗಭದ್ರ ನದಿಯವರೆಗಿನ ಪ್ರದೇಶ ಮರಾಠರಿಗೆ ದಕ್ಕಿತು. ನಿಜಾಮನಿಗೆ ಬಳ್ಳಾರಿ ಮತ್ತು ಕಡಪ ಪ್ರದೇಶಗಳು ಹಾಗೂ ಕೃಷ್ಣಾ ತುಂಗಭದ್ರ ಸಂಗಮದ ಉತ್ತರಭಾಗಗಳು ಸೇರಿದವು. ಇದರೊಂದಿಗೆ ಮೂರು ಕೋಟಿ ರೂಪಾಯಿಗಳ ಯುದ್ಧ ನಷ್ಟ ಪರಿಹಾರವನ್ನು ಟಿಪ್ಪು ಭರಿಸಬೇಕಾಯಿತು. ಈ ಪರಿಹಾರಕ್ಕೆ ಭದ್ರತೆಯಾಗಿ ತನ್ನ ಇಬ್ಬರು ಮಕ್ಕಳನ್ನು ಇಂಗ್ಲಿಷರಲ್ಲಿ ಒತ್ತೆ ಇಡಲು ಆತ ಒಪ್ಪಿದ.

	ಮೂರನೆಯ ಮೈಸೂರು ಯುದ್ಧ ಭಾರತದ ಇತಿಹಾಸದ ಮೇಲೆ ಮಹತ್ತರವಾದ ಪರಿಣಾಮ ಬೀರಿತು. ಟಿಪ್ಪು ಸುಲ್ತಾನ್ ಚೇತರಿಸಿಕೊಳ್ಳುವುದು ಅಸಾಧ್ಯವೆನ್ನುವಷ್ಟು ಕಷ್ಟನಷ್ಟಕ್ಕೊಳಗಾಗಿದ್ದ. ಮೈಸೂರು ಸಂಸ್ಥಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಅವಕಾಶವಿದ್ದರೂ ಮರಾಠರು ಮತ್ತು ನಿಜಾಮರಿಗೆ ಅದು ಇಷ್ಟವಿರಲಿಲ್ಲ. ಕಾರ್ನ್‍ವಾಲೀಸ್ ಇದರಿಂದುಂಟಾಗುವ ತೀವ್ರ ಗೊಂದಲವನ್ನು ಮುಂದೂಡುವುದು ಸೂಕ್ತವೆಂದು ಭಾವಿಸಿದ. ಇದರಿಂದ ಟಿಪ್ಪುವಿಗೆ ಹಂಚಿ ಛಿದ್ರವಾದ ರಾಜ್ಯ ಉಲಿದುಕೊಂಡಿತು. ಟಿಪ್ಪು ಮೊದಲಿನಂತೆ ಬ್ರಿಟಿಷರಿಗೆ ಸವಾಲಾಗುವ ಶಕ್ತಿ ಕಳೆದುಕೊಂಡ. ಬ್ರಿಟಿಷರು ಭಾರತದ ರಾಜಕೀಯದಲ್ಲಿ ಎದುರಿಲ್ಲದ ಶಕ್ತಿಯಾಗಿ ಬೆಳೆದರು.

	ನಾಲ್ಕನೆಯ ಮೈಸೂರು ಯುದ್ಧ (1799) : ಕಳೆದ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಭಾರಿ ನಷ್ಟಕ್ಕೊಳಗಾಗಿದ್ದರೂ ತನ್ನ ಶಕ್ತಿ ಸಂವರ್ಧನೆಯನ್ನು ಮುಂದುವರಿಸಿದ. ಕೆಲವೇ ವರ್ಷಗಳಲ್ಲಿ ಯುದ್ಧ ನಷ್ಟ ಪರಿಹಾರವನ್ನು ಇಂಗ್ಲಿಷರಿಗೆ ನೀಡಿ ಅವರಿಂದ ತನ್ನ ಮಕ್ಕಳು ಬಿಡಿಸಿಕೊಂಡ. ಫ್ರಾನ್ಸಿನ ಸೇನಾಪತಿ ನೆಪೋಲಿಯನ್ನನೊಡನೆ ಸಂಧಾನ ನಡೆಸಿದ. ಕೋಟೆಕೊತ್ತಲಗಳನ್ನು ಭದ್ರಪಡಿಸಲು ಪ್ರಾರಂಭಿಸಿದ. ಟಿಪ್ಪುವಿನ ಈ ಚಟುವಟಿಕೆಗಳನ್ನು ಗಮನಿಸಿದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿಯ ಸೂತ್ರವನ್ನು ಮುಂದಿಟ್ಟರು. ಇದು ವಾಸ್ತವವಾಗಿ ಇಂಗ್ಲಿಷರ ಅಧೀನವನ್ನು ಒಪ್ಪಿಕೊಳ್ಳುವುದೇ ಆಗಿತ್ತು. ಹೈದರಾಬಾದಿನ ನಿಜಾಮ ಇದನ್ನು ಒಪ್ಪಿದ್ದ. ಟಿಪ್ಪು ಸಹಾಯಕ ಸೈನ್ಯಪದ್ಧತಿಗೆ ಒಳಗಾಗಲು ನಿರಾಕರಿಸಿದ. ಆಗ ಇಂಗ್ಲಿಷರು ಟಿಪ್ಪುವನ್ನು ನಿರ್ಮೂಲ ಮಾಡಲು ನಿರ್ಧರಿಸಿದರು.

	ಟಿಪ್ಪುಸುಲ್ತಾನ್ ನಾಲ್ಕನೆಯ ಮೈಸೂರು ಯುದ್ಧವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅವನ ಸಾಮಂತರು ಮತ್ತು ಪಾಳೆಯಗಾರರು ಟಿಪ್ಪುವಿನ ದರ್ಪದಿಂದ ಬೇಸತ್ತು ಮತ್ತೆ ಕೆಲವರು ಪಾಳೆಯಪಟ್ಟುಗಳನ್ನು ಕಳೆದುಕೊಂಡು ಬ್ರಿಟಿಷರ ಆಕ್ರಮಣವನ್ನು ಸ್ವಾಗತಿಸಿದರು. ರಾಜಧಾನಿಯಲ್ಲಿ ಒಳಸಂಚುಗಳು ಹೆಚ್ಚಿದ್ದುವು. ಅನೇಕ ಅಧಿಕಾರಿಗಳು ಟಿಪ್ಪುವಿನ ಅಧೀನತೆಯಿಂದ ಹೊರಬರಲು ಹವಣಿಸುತ್ತಿದ್ದರು. ಇಂಥ ಪರಿಸ್ಥಿತಿಯಲ್ಲೂ ಟಿಪ್ಪು ಇಂಗ್ಲಿಷರ ದಾಳಿಯನ್ನು ಎದುರಿಸಲು ಸಜ್ಜಾದ. ಈ ಬಾರಿ ಮರಾಠರು ಟಿಪ್ಪುವಿನ ವಿರುದ್ಧ ಯುದ್ಧದಲ್ಲಿ ಭಾಗವಹಿಸಲಿಲ್ಲ. ಇಂಗ್ಲಿಷರೇ ಸಾಕಷ್ಟು ಪ್ರಬಲರಾಗಿದ್ದು ನಾಲ್ಕು ಕಡೆಗಳಿಂದಲೂ ಮೈಸೂರನ್ನು ಮುತ್ತಿದರು. ನಿಜಾಮನಂತೂ ಅವರ ಅಧೀನದಲ್ಲೇ ಇದ್ದ.

	1799ರ ಪ್ರಾರಂಭದಲ್ಲಿ ಜನರಲ್ ಹ್ಯಾರಿಸ್ ಮದರಾಸು ಕಡೆಯಿಂದ ದಂಡೆತ್ತಿ ಬಂದ. ಮುಂಬಯಿ ಕಡೆಯಿಂದ ಆರ್ಥರ್ ವೆಲ್ಲೆಸ್ಲಿ ಇಂಗ್ಲಿಷ್ ಸೈನ್ಯದ ನೇತೃತ್ವ ವಹಿಸಿ ಬಂದ. ಹಾಗೆಯೇ ಹೈದರಾಬಾದ್ ಮತ್ತು ಮಲಬಾರ್ ಕಡೆಗಳಿಂದಲೂ ತುಕಡಿಗಳು ಹೊರಟವು. ಮೈಸೂರು ರಾಜ್ಯದೊಳಗೆ ಹೆಚ್ಚಿನ ಪ್ರತಿಭಟನೆ ಕಂಡು ಬರಲಿಲ್ಲ. ರಾಜಧಾನಿಗೆ ಹತ್ತಿರ ಬಂದಾಗ ಟಿಪ್ಪು ಮಳವಳ್ಳಿ ಮತ್ತು ಪಿರಿಯಾ ಪಟ್ಟಣಗಳಲ್ಲಿ ಆಂಗ್ಲ ಸೈನ್ಯಗಳನ್ನು ಎದುರಿಸಿದ, ಆದರೆ ಬೇಗ ಶ್ರೀರಂಗಪಟ್ಟಣವನ್ನು ಸೇರಿಕೊಂಡ. ಆಂಗ್ಲ ತುಕಡಿಗಳು ಮೇ 4ರಂದು ಕೋಟೆಯ ಮೇಲೆ ದಾಳಿ ಮಾಡಿದುವು.

ಶರಣಾಗತಿಗಿಂತ ಸಾವು ಮೇಲೆಂದು ಬಗೆದ ಟಿಪ್ಪು ತನ್ನೆಲ್ಲ ಶಕ್ತಿಯನ್ನು ಸಂಘಟಿಸಿಕೊಂಡು ಶತ್ರುವನ್ನು ಎದುರಿಸಿದ. ಆದರೆ ದುರ್ಬಲವಾಗಿದ್ದ ಸೈನ್ಯ ಹಾಗೂ ಒಳಸಂಚುಕೋರರ ಪಿತೂರಿ ಟಿಪ್ಪು ಬೇಗ ಮಣಿಯುವಂತೆ ಮಾಡಿದವು. ಅವನು ರಣರಂಗದಲ್ಲೇ ಹೋರಾಡುತ್ತ ವೀರ ಮರಣವನ್ನಪ್ಪಿದ. ರಾಜ್ಯ ಸಂಪೂರ್ಣವಾಗಿ ಬ್ರಿಟಿಷರ ಅಧೀನವಾಯಿತು.

	ನಾಲ್ಕನೆಯ ಮೈಸೂರು ಯುದ್ಧದಿಂದಾಗಿ ದಕ್ಷಿಣ ಭಾರತದ ಕಟ್ಟಕಡೆಯ ಪ್ರಬಲ ಶಕ್ತಿ ಅಸ್ತಂಗತವಾಯಿತು. ರಾಜ್ಯ ಮತ್ತೆ ಮೂರು ಭಾಗವಾಯಿತು. ತೀರ ಪ್ರದೇಶ, ವೈನಾಡು, ಕೊಯಮತ್ತೂರು ಮೊದಲಾದ ಭಾಗಗಳು ಮದರಾಸು ಪ್ರಾಂತ್ಯಕ್ಕೆ ಸೇರಿದುವು. ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳು, ಗೂಟಿ ಮತ್ತು ಗುರ್ರಮಕೊಂಡಗಳು ನಿಜಾಮನಿಗೆ ದೊರೆತವು. ಸುಂಡ ಮತ್ತು ಹರಪನಹಳ್ಳಿಗಳನ್ನು ಮರಾಠರು ನಿರಾಕರಿಸಿದಾಗ ಅವನ್ನು ನಿಜಾಮ ಮತ್ತು ಆಂಗ್ಲರು ಹಂಚಿಕೊಂಡರು. ಹಳೆಯ ಮೈಸೂರು ರಾಜ್ಯವೆಂದು ಹೆಸರಾದ ಈಗಿನ ದಕ್ಷಿಣ ಕರ್ನಾಟಕದ ಭಾಗವನ್ನು ಮೈಸೂರು ಒಡೆಯರ ವಶಕೊಪ್ಪಿಸಲಾಯಿತು. ಇದರಿಂದಾಗಿ ದಕ್ಷಿಣ ಭಾರತದಲ್ಲಿ, ಇತರ ಅನೇಕ ಕಡೆಗಳಂತೆ, ಬ್ರಿಟಿಷರ ಅಧಿಪತ್ಯ ಅಬಾಧಿತವಾಯಿತು.
										 		(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ